ದೊಡ್ಡ ತಪ್ಪು ತಿದ್ದಿಕೊಳ್ಳುತ್ತೇವೆಂದು ಹೊರಡುವ ಭರದಲ್ಲಿ…

“ಅದೊಂದು ಇಲ್ದೆ ಹೋದ್ರೆ ಅವನು ದೇವರಂಥ ಮನುಷ್ಯ. ಏನು ಮಾಡೋದು ಹೇಳಿ? ವಿಪರೀತ ಕುಡೀತಾನೆ…” ಎಂಬ ಧಾಟಿಯ ಮಾತು ಸಾಕಷ್ಟು ಕೇಳಿರುತ್ತೀರಿ. “ಅದೊಂದು ಇಲ್ಲದೆ ಹೋದರೆ” ಎಂಬುದಕ್ಕೆ ಹೆಚ್ಚಿನ ಮಹತ್ವವಿರುತ್ತದೆ ಮಾತುಗಳಲ್ಲಿ. ಅವನು ಕುಡುಕ, ಕೃಪಣ, ಕೋಪಿಷ್ಟ, ಲಂಪಟ, ಜುಗಾರಿ ಇತ್ಯಾದಿ ಇತ್ಯಾದಿ. ಈ ಪೈಕಿ ಯಾವುದಿರುತ್ತದೋ ಅದನ್ನು ಹೆಸರಿಸಿ, “ಅದೊಂದು” ಇಲ್ದೆ ಹೋಗಿದ್ರೆ ದೇವರಂಥ ಮನುಷ್ಯ ಅನ್ನುವುದು ಲೋಕಾರೂಢಿ. ಇದು ಪರಂಪರಾಗತವಾಗಿ ಬಂದ ಮೂರ್ಖತನವೂ
ಹೌದು.
ದುಶ್ಚಟಗಳನ್ನು ನಾನು ಬೆಂಬಲಿಸುತ್ತೇನೆ ಅಂದುಕೊಳ್ಳಬೇಡಿ. ಆದರೆ ನಿಜಕ್ಕೂ ದುಶ್ಚಟಗಳು ನಮಗೆ ಮಾಡಬಹುದಾದ ಹಾನಿಗಳೇನು ಅನ್ನೋದನ್ನು ನೋಡೋಣ ಬನ್ನಿ. ಮೊದಲನೆಯದಾಗಿ ಕುಡಿತವನ್ನೇ ತೆಗೆದುಕೊಳ್ಳಿ. ಕುಡಿತ ಆರೋಗ್ಯ ಕೆಡಿಸುತ್ತದೆ, ಮರ್ಯಾದೆ ಕಳೆಯುತ್ತದೆ, ಸ್ಥಿಮಿತ ಹಾಳು ಮಾಡುತ್ತದೆ ಅಂತೆಲ್ಲಾ ಅಂತಾರೆ. ಇವೆಲ್ಲಕ್ಕಿಂತ ಹೆಚ್ಚಿನ ಅಪಾಯವನ್ನು ಜನ ಗಮನಿಸಿರುವುದಿಲ್ಲ. “ಕುಡಿತ ಮನುಷ್ಯನನ್ನು ಸೋಮಾರಿಯನ್ನಾಗಿ ಮಾಡುತ್ತದೆ” ಎಂಬುದು ಹೆಚ್ಚು ನಿಜ. ವಿಪರೀತ ಕುಡಿರುವವರು ಕೆಲಸಗಳನ್ನು ಮುಂದೂಡುತ್ತಾ ಹೋಗುತ್ತಾರೆ. ಆರರಿಂದ ಹನ್ನೆರಡು ತಾಸು ಕುಡಿತಕ್ಕೆ ಖರ್ಚಾಗಿ ಹೋಗುತ್ತದೆ. ಕುಡಿದಾಗ ಸೊಗಸಾದ ಐಡಿಯಾಗಳು ಬರುತ್ತವಾದರೂ, ಅವುಗಳನ್ನು ಕಾರ್ಯರೂಪಕ್ಕೆ ತುವಷ್ಟರಲ್ಲಿ ಮನುಷ್ಯ ಮತ್ತೆ ಕುಡಿದಿರುತ್ತಾನೆ ಅಥವಾ ಕಾರ್ಯರೂಪಕ್ಕೆ ತರುವಷ್ಟು ಸಹನೆ ಮತ್ತು ಎನರ್ಜಿ ಉಳಿದಿರುವುದಿಲ್ಲ. ವಿಪರೀತ ಧಾರಾಳಿಯಾಗುತ್ತಾನೆ. ಗಿಲ್ಟ್ ಮುಚ್ಚಿಡುವುದಕ್ಕಾಗಿ ಅವಮಾನಿತನಾಗುತ್ತಾನೆ. ಸಾಲಗಾರನಾಗುತ್ತಾನೆ.  ಕೊನೆಯಲ್ಲಿ ಕೂತು ಲೆಕ್ಕ ಹಾಕಿದರೆ ಒಬ್ಬ ಕುಡುಕ ವಿಫಲಜೀವಿಯಾಗಿರುತ್ತಾನೆ. ಇವೆಲ್ಲವೂ ಆತ ತನಗೆ ತಾನು ಮಾಡಿಕೊಳ್ಳುವ ಅಪಚಾರಗಳು. ಇದರಿಂದ ಆತನ ಮನೆ ಮಂದಿಗೆ ಸಮಸ್ಯೆಯಾಗಬಹುದೇ ಹೊರತು, ಬೇರೆ ತರಹದ ನಷ್ಟಗಳಿರುವುದಿಲ್ಲ. “ಕುಡಿದು ಅತ್ಯಾಚಾರ ಮಾಡಿದ, ಕೊಲೆ ಮಾಡಿದ” ಅಂದರೆ ನಾನು ಒಪ್ಪುವುದಿಲ್ಲ. ಅಲ್ಲಿ ಅವನಲ್ಲಿನ Instinct ಗಳು. “ಅತ್ಯಾಚಾರ ಮಾಡುವಾಗ ಆತ ಕುಡಿದಿದ್ದ ಅಥವಾ ಕೊಲೆ ಮಾಡುವಾಗ ಆತ ಕುಡಿದಿದ್ದ” ಎಂಬುದು ಹೆಚ್ಚುವರಿ. ಅಲ್ಲಿ ದೋಷ ಕುಡಿತದ್ದಲ್ಲ.
ಹಾಗೇನೇ ಇಸ್ಪೀಟು ಅದೂ ಕೂಡ ತನಗೆ ತಾನೇ ಮಾಡಿಕೊಳ್ಳುವ ಅಪಚಾರ. ದುರಾಸೆಗೆ ಬಿದ್ದ ಮನುಷ್ಯ ಇಸ್ಪೀಟಿನ ಚಟಕ್ಕೆ ಬಳಿತ್ತಾನೆ. ದುಡ್ಡಿಗಿಂತ ಹೆಚ್ಚಾಗಿ ಬದುಕಿನ ಅಮೂಲ್ಯ ಗಂಟೆಗಳನ್ನು, ದಿನಗಳನ್ನು ಚಕ್ಕಂಬಟ್ಲೆ ಹಾಕಿಕೊಂಡು ಕೂತು ಪೋಲು ಮಾಡಿ ಬಿಡುತ್ತಾನೆ. “ಸ್ಕರ್ಟ್ ಚೇಸಿಂಗ್” ಅಂತ ಇಂಗ್ಲಿಷಿನಲ್ಲಿ ಅನ್ನೋದು: ಹೆಂಗಸರ (ಮತ್ತು ಗಂಡಸರ) ಬಲಹೀನತೆಗೆ ಸಂಬಂಧಿಸಿದ ಹಾಗೆ. ಈ ಚಟವಿರುವವರು ವಿಪರೀತ ಸುಳ್ಳು ಹೇಳುತ್ತಾರೆ ಮೋಸ ಮಾಡುತ್ತಾರೆ ಎಂಬುದು ಬಿಟ್ಟರೆ ಈ ಚಟವೂ ಕೂಡ ತನಗೆ ತಾನು ಮಾಡಿಕೊಳ್ಳುವ ಅಪಚಾರವೇ. ಲೋಲುಪತೆಯ ಗುಂಗಿಗೆ ಬಿದ್ದು ರಾಜ್ಯಗಳನ್ನೇ ಕಳೆದುಕೊಂಡವರನ್ನು ನೋಡಿದ್ದೇನೆ. ಹೆಂಗಡ ಖಯಾಲಿಗೆ ಬಿದ್ದು ಹಣ, ಗೌರವ, ನೆಮ್ಮದಿ ಕಳೆದುಕೊಂಡವರಿದ್ದಾರೆ. ಆರೋಗ್ಯವನ್ನು ರಿಸ್ಕಿಗೆ ತಳ್ಳಿದವರೂ ಕಡಿಮೆಯಿಲ್ಲ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಈ ಚಟವೂ ಮನುಷ್ಯನ ಸಮಯವನ್ನು ಹಾಳು ಮಾಡುತ್ತದೆ. ಅತಿ ದೊಡ್ಡ ರಿಸ್ಕೆಂದರೆ ಅದೇ.
ಬಿಡಿ, ತಪ್ಪುಗಳ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋದೀತು. ಆದರೆ ಇವೆಲ್ಲವೂ ಮೇಜರ್‍ ಮಿಸ್ಟೇಕ್‌ಗಳು. ಕೆಲವೊಮ್ಮೆ ಅಕ್ಷಮ್ಯ ಅಂತ ಪರಿಗಣಿಸಲ್ಪಡುವಂತಹವು. ಇವು ಕೊಡುವ ಆನಂದ ಎಂಥದ್ದೇ ಆಗಿರಲೀ ಕಟ್ಟಿಸಿಕೊಳ್ಳುವ ಕಂದಾಯ ಮಾತ್ರ ಬಹಳ ದೊಡ್ಡದಾಗಿರುತ್ತದೆ. ನನ್ನ ಮಟ್ಟಿಗೆ ಒಬ್ಬ ಮನುಷ್ಯ ತನ್ನ ಚಟಗಳಿಗಾಗಿ ಕಟ್ಟುವ ಅತೀ ದೊಡ್ಡ ಕಂದಾಯವೇನೆಂದರೆ-ಸಮಯ. ನಿಜಕ್ಕೂ ಅಕ್ಷಮ್ಯವಾದುದು ಅದೇ: ಚಟವಲ್ಲ. ಒಂದು ಪೆಗ್ ವಿಸ್ಕಿ, ಒಂದು ಸುತ್ತು ಇಸ್ಪೀಟು, ಚಿಕ್ಕದೊಂದು ಸರಸ ಯಾರನ್ನೂ ಈತನಕ ಕೊಂದಿಲ್ಲ.
ಆದರೆ ತಪ್ಪುಗಳು ಕೊಲ್ಲಲೇ ಬೇಕು ಎಂದಿಲ್ಲವಲ್ಲ? ಲೆಕ್ಕ ಹಾಕಿದರೆ, ನಾವು ಯಾವ್ಯಾವುದನ್ನು ತಪ್ಪು-ಅಪರಾಧ ಅಥವಾ ದುಷ್ಚಟ ಅನ್ನುತ್ತೇವೆಯೋ, ಅವುಗಳಿಗಿಂತ ಹೆಚ್ಚು ತಪ್ಪುಗಳನ್ನು ದಿನವಿಡೀ ಮಾಡುತ್ತಿರುತ್ತೇವೆ. ಆದರೆ ದೊಡ್ಡ ತಪ್ಪಿನ ಅಥವಾ ದುಷ್ಚಟದ Glare ನಲ್ಲಿ ಅದರ ಝಳದಲ್ಲಿ ಚಿಕ್ಕ ತಪ್ಪುಗಳೂ ಮರೆಯಾಗಿ ಬಿಡುತ್ತವೆ. ವಿಪರೀತ ಕುಡಿಯುವ ಗಂಡ “ ಅದನ್ನೊಂದು ಬಿಟ್ರೆ ಸಾಕು, ನನ್ನ ಗಂಡ ದೇವರಂಥವನು” ಅಂತ ಅವನ ಹೆಂಡತಿ ಅಂದು ಕೊಳ್ಳುತ್ತಿರುತ್ತಾಳೆ. ಅವನು ಮಾಡುವ ಪ್ರತಿಯೊಂದು ಕೂಡಾ “ಕುಡಿದದ್ದರಿಂದಲೇ ಮಾಡುತ್ತಾನೆ” ಅಂತ ತಪ್ಪು ತಿಳಿದಿರುತ್ತಾಳೆ. ಆದರೆ ಅವನ ಶ್ವಪಚತನ, ಮುಂಗೋಪ, ಅಸಹನೆ, ಪೆಡಸು ಮಾತು, ಸೋಮಾರಿತನ, ಸಾಲಕೋರತನ, ಲಂಚಕೋರತನ, ಲಂಪಟತೆ ಮುಂತಾದವು ಕುಡಿತಕ್ಕೆ ರಿಲೇಟ್ ಆಗದೆಯೂ ಅವನಲ್ಲಿ ಮನೆ ಮಾಡಿಕೊಂಡಿರಬಹುದು ಅಂತ ಆಕೆಗೆ ಅನ್ನಿಸಿರುವುದಿಲ್ಲ. ಕುಡಿಯೋದೊಂದು ಬಿಟ್ಟು ಬಿಟ್ಟರೆ ನನ್ನ ಗಂಡನಿಗಿಂತ ದೇವರಿಲ್ಲ ಅಂದುಕೊಂಡಿರುತ್ತಾಳೆ. ದೇವರ ಪಾತ್ರದಾರಿಯಾದ ಗಂಡನೂ ಹಾಗಂತಲೇ ಅಂದುಕೊಂಡಿರುತ್ತಾನೆ. ಸುತ್ತಲಿನವರೂ ಕೂಡ “ಅದೊಂದು” ತಿದ್ದಿ ಸರಿಪಡಿಸಿ ಬಿಟ್ಟರೆ ಸಾಕು ಅಂದುಕೊಂಡಿರುತ್ತಾರೆ.
ಎಲ್ಲರೂ ಮಾಡುವ ತಪ್ಪೇ ಅದು. ಮನುಷ್ಯನ ಅತಿ ದೋಡ್ಡ ತಪ್ಪನ್ನು ತಿದ್ದಲು ಹೋಗುತ್ತಾರೆ. ಅಥವಾ ತಮ್ಮ ಮೇಜರ್‍ ಬಲಹೀನತೆಯನ್ನು ಸರಿಪಡಿಸಿಕೊಳ್ಳಲು ಹೆಣಗುತ್ತಾರೆ. ಕುಡಿತ ಬಿಡಲು ಆಸ್ಪತ್ರೆ ಸೇರಿಕೊಳ್ಳುವುದರಿಂದ ಹಿಡಿದು ಹೆಂಗಸರ ಖಯಾಲಿ ಬಿಡಲು ಅಯ್ಯಪ್ಪ ಸ್ವಾಮಿಯ ಮಾಲೆ ಹಾಕುವ ತನಕ ಸರದಿ.
ಆದರೆ ಫ್ರೆಂಡ್ಸ್, ಓದು ಸಲ ಈ ಮೇಜರ್‍ ತಪ್ಪುಗಳನ್ನು ಪಕ್ಕಕ್ಕಿಟ್ಟು ಯೋಚಿಸಿ. ನಮ್ಮಲ್ಲಿ ಎಷ್ಟೊಂದು ಚಿಕ್ಕ ಚಿಕ್ಕ ತಪ್ಪು, ಬಲಹೀನತೆ, ಅಪಸವ್ಯಗಳಿವೆಯಲ್ಲವೇ? ನನಗಂತೂ ನಾನೊಂದು ಬೃಹತ್ ತಪ್ಪುಗಳ ಮೂಟೆ ಅನ್ನಿಸಿಬಿಡುತ್ತದೆ. Actually ಇವು ಸುಲಭಕ್ಕೆ ಸರಿಪಡಿಸಬಹುದಾದ, ತಿದ್ದುಕೊಳ್ಳಬಹುದಾದ ಚಿಕ್ಕ ಚಿಕ್ಕ ತಪ್ಪುಗಳೇ. ಆದರೆ, ಮೊದಲು ದೊಡ್ಡ ತಪ್ಪು ಸರಿಪಡಿಸಿಕೊಳ್ಳೋಣ. ಆಮೇಲೆ ಉಳಿದವು ತಂತಾನೆ ಸರಿಹೋಗುತ್ತದೆ ಎಂಬ ಮೂರ್ಖ ತೀರ್ಮಾನಕ್ಕೆ ಬರುತ್ತೇವೆ. ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಬೇಕಾದ ಹುಡುಗ ನಾನು ಐ.ಎ.ಎಸ್ ಮಾಡುವುದರ ಮೇಲೆ ಗಮನವಿಟ್ಟಿದ್ದೇನೆ ಅಂದುಕೊಳ್ಳುವ ಹಾಗೆ.

- ಅರೆಯೂರು ಚಿ.ಸುರೇಶ್, ತುಮಕೂರು.
ಉಹೂಂ, ಬದುಕು ಹಾಗೆಲ್ಲ ಒಂದು ದೊಡ್ಡ ತಪ್ಪು ಸರಿಪಡಿಸಿದ ಮಾತ್ರಕ್ಕೇ ತಂತಾನೇ ಚಿಕ್ಕಪುಟ್ಟ ತಪ್ಪುಗಳನ್ನು ಸರಿಗೊಳಿಸುವುದಿಲ್ಲ. ಪ್ರತೀ ತಪ್ಪನ್ನೂ ನಾವು ಪ್ರಯತ್ನಪೂರ್ವಕವಾಗಿ ತಿದ್ದಿಕೊಳ್ಳಬೇಕಾಗುತ್ತದೆ. ಯಾವತ್ತೋ ಒಂದು ದಿನ ಕುಡಿತ ಬಿಟ್ಟ ಮೇಲೆ ಅದು ಕಂಟ್ರೋಲಿಗೆ ಬಂದ ಮೇಲೆ ಸಿಗರೇಟು ಬಿಟ್ಟರಾಯಿತು ಅಂತ ಹೊಸ ಸಿಗರೇಟಿಗೆ ಕಡ್ಡಿ ಗೀರುವುದಿದೆಯಲ್ಲ ಮೂರ್ಖತನವೆಂದರೆ ಅದೇ.
“ವಿಕೆ ನ್ಯೂಸ್"


ಗೆಲುವೆಂಬ ಅಂತ್ಯವಿಲ್ಲದ ಪಯಣಕ್ಕೆ ಏನೇನು ಬೇಕು?

’ಗೆಲುವು’ ಎಂಬ ಮೂರಕ್ಷರದ ಸಂಗತಿಗೆ ಸಂಬಂಧಿಸಿದಂತೆ ಅನೇಕ ದಶಕಗಳಿಂದ ರಿಸರ್ಚು ನಡೆಯುತ್ತಲೇ ಇದೆ. ಗೆಲುವೆಂಬುದು ಆಕಸ್ಮಿಕವಾ? ಖಂಡಿತ ಅಲ್ಲ. ಅವಿವೇಕಿಗಳು ಮಾತ್ರ ಬದುಕಿನಲ್ಲಿ ಆಕಸ್ಮಿಕದಂತಹುದೇನಾದರೂ ಘಟಿಸಲಿ ಎಂದು ಕಾಯುತ್ತ ಕೂಡುತ್ತಾರೆ. ತುಂಬ ಸುಂದರವಾದ ತೋಟವೊಂದರಿಂದ ಹೊರಬರುತ್ತಿದ್ದ ಅದರ ಒಡೆಯನನ್ನು ನಿಲ್ಲಿಸಿ ಪಾದ್ರಿ ಹೇಳಿದನಂತೆ, ’ದೇವರು ತುಂಬ ಹೃದಯವಂತ. ನಿನಗೆ ಅದ್ಬುತವಾದ ತೋಟ ಕೊಟ್ಟಿದ್ದಾನೆ. ಆತನಿಗೆ ನೀನು ಋಣಿಯಾಗಿರಬೇಕು.’ ಕೂಡಲೇ ತೋಟದ ಒಡೆಯ ವಿನೀತವಾದ ದನಿಯಲ್ಲಿ ಹೇಳಿದನಂತೆ: ’ನಿಜ, ದೇವರು ಹೃದಯವಂತ. ನನಗೆ ತೋಟ ಕೊಟ್ಟ. ಆದರೆ ಕೊಡುವ ಮುನ್ನ ಆತನ ಹತ್ತಿರವೇ ಇತ್ತಲ್ಲ ತೋಟ? ಆಗ ನೋಡಬೇಕಿತ್ತು ನೀವು ಆ ತೋಟವನ್ನ!’ ಮನುಷ್ಯನ ವಿಶ್ವಾಸವೆಂದರೆ ಅದು.

ಗೂಳೂರು ಕೆರೆಯಲ್ಲಿ 6 ಆನೆಗಳು ಪ್ರತ್ಯಕ್ಷ ;ನಾಗರಿಕರಲ್ಲಿ ಆತಂಕತುಮಕೂರು: ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರು ಸಾಲ ಮಾಡಿ ಬೆಳೆದ ಬೆಳೆಗೆ ಕಾಡಾನೆಗಳ ಹಿಂಡು ದಾಳಿ ಮಾಡಿ ಲಕ್ಷಾಂತರ ರೂ.ಮೌಲ್ಯದ ಬೆಳೆ ಹಾನಿಮಾಡಿದ್ದು, ಈಗ ಮತ್ತೆ ಜಿಲ್ಲೆಗೆ ೬ ಕಾಡಾನೆಗಳ ಹಿಂಡು ಪ್ರವೇಶಿಸಿರುವುದು ಜಿಲ್ಲೆಯ ರೈತರ ಹಾಗೂ ಅರಣ್ಯಾಽಕಾರಿಗಳ ನಿದ್ದೆಗೆಡಿಸಿದೆ. ಕಳೆದ ೨-೩ ದಿನಗಳಿಂದಷ್ಟೇ ಜಿಲ್ಲೆಯಿಂದ ಹೊರ ಹೋಗಿ ರೈತರಿಗೆ ಅರಣ್ಯಾಧಿಕಾರಿಗಳಿಗೆ ನೆಮ್ಮದಿ ತಂದಿದ್ದ ಕಾಡಾನೆಗಳು ಮತ್ತೆ ಜಿಲ್ಲೆಗೆ ಆಗಮಿಸಿದ್ದು ನಗರ ಸಮೀಪದ ಗೂಳೂರು ಕೆರೆಯಲ್ಲಿ ಆನೆಗಳು ಬೀಡು ಬಿಟ್ಟಿವೆ.
ಕಳೆದ ತಿಂಗಳು ೯ ಕಾಡಾನೆಗಳು ಜಿಲ್ಲೆಗೆ ಬಂದಿದ್ದು, ಅದರಲ್ಲಿ ೬ ಕಾಡಾನೆ ಜಿಲ್ಲೆಯ ತುಮಕೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ ತಾಲೂಕುಗಳಲ್ಲಿ ಸಂಚರಿಸಿ, ೩ ಕಾಡಾನೆಗಳು ತುಮಕೂರು ಸುತ್ತಮುತ್ತ ತಿಂಗಳ ಕಾಲ ಬೀಡುಬಿಟ್ಟಿದ್ದವು. ಮೊದಲು ೩ ಕಾಡಾನೆಗಳನ್ನು ತುಮಕೂರು ಅರಣ್ಯಾಧಿಕಾರಿಗಳು ಜಿಲ್ಲೆಯಿಂದ ಅರಣ್ಯದತ್ತ ಓಡಿಸಿದ್ದರು.
ಉಳಿದ ೬ ಕಾಡಾನೆಗಳು ಜಿಲ್ಲೆಯಲ್ಲೇ ಸಂಚರಿಸುತ್ತಿದ್ದವು. ವಿವಿಧ ತಾಲೂಕುಗಳಲ್ಲಿ ಸಂಚರಿಸಿ ಮತ್ತೆ ತುಮಕೂರಿನ ಗಂಗಸಂದ್ರ ಕೆರೆಯಲ್ಲಿ ಬೀಡು ಬಿಟ್ಟಾಗ ಅವುಗಳನ್ನು ಕಳೆದ ನ.೨೬ ರಂದು ಜಿಲ್ಲೆಯಿಂದ ಅರಣ್ಯಾಽಕಾರಿಗಳು ಓಡಿಸಿದ್ದರು. ಗುರುವಾರ ರಾತ್ರಿ ಜಿಲ್ಲೆಗೆ ಪ್ರವೇಶಿಸಿದ ಕಾಡಾನೆಗಳನ್ನು ಓಡಿಸಲು ಎಲ್ಲಾ ರೀತಿಯ ಪ್ರಯತ್ನಿಸಿದರೂ ಜಿಲ್ಲೆಯಿಂದ ಓಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತುಮಕೂರು ಸಮೀಪದ ಗೂಳೂರು ಕೆರೆಗೆ ಆನೆಯ ಹಿಂಡು ಬಂದು ತಂಗಿದ್ದು, ಆನೆ ನೋಡಲು ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಜನರನ್ನು ನಿಯಂತ್ರಿಸುವುದೇ ಅರಣ್ಯಾಧಿಕಾರಿಗಳಿಗೆ ಸಂಕಷ್ಟವಾಗಿದೆ.
ಆನೆಗಳಿಂದ ಬೆಳೆಹಾನಿ:
ಕಾಡಾನೆಗಳಿಂದ ಲಕ್ಷಾಂತರ ರೂ. ಬೆಳೆ ಹಾನಿಯಾಗಿದ್ದು ತೆಂಗು, ಅಡಕೆ, ಬಾಳೆ ತೋಟಗಳನ್ನು ಹಾಳು ಮಾಡಿರುವುದು ಒಂದೆಡೆಯಾದರೆ ರಾಗಿ, ಭತ್ತ ಸೇರಿದಂತೆ ಇತರೆ ಬೆಳೆಗಳನ್ನು ಕಾಡಾನೆಗಳು ಹಾಳು ಮಾಡಿವೆ. ಈಗ ಮತ್ತೆ ಕಾಡಾನೆಗಳು ಜಿಲ್ಲೆಗೆ ಕಾಲಿಟ್ಟಿರುವುದು ಇನ್ನೂ ಹೆಚ್ಚು ಬೆಳೆ ಹಾಳು ಮಾಡುತ್ತವೆ ಎನ್ನುವ ಭೀತಿ ಎದುರಾಗಿದೆ.
ತುಮಕೂರು, ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಶಿರಾ ಮತ್ತಿತರೆ ಕಡೆಗಳಲ್ಲಿ ಹೇಮಾವತಿ ನಾಲೆ ನೀರು ಕೆರೆಗಳಿಗೆ ಹರಿಸಿದ್ದು, ಕಾಡಿನಿಂದ ಬರುವ ಆನೆಗಳಿಗೆ ಈ ಭಾಗದಲ್ಲಿ ಕುಡಿಯಲು ನೀರು, ತಿನ್ನಲು ಆಹಾರ, ಉತ್ತಮ ವಾತಾವರಣ ಇದೆ. ಇದನ್ನರಿತ ಕಾಡಾನೆಗಳ ಹಿಂಡು ತುಮಕೂರು ಜಿಲ್ಲೆಗೆ ಮತ್ತೆ ಮತ್ತೆ ದಾಳಿ ಮಾಡುತ್ತಿವೆ. ನಾವು ಎಷ್ಟು ಓಡಿಸಿದರೂ ಅವು ಮತ್ತೆ ಅದೇ ದಾರಿಯಲ್ಲಿ ಜಿಲ್ಲೆಗೆ ಪ್ರವೇಶಿಸುತ್ತಿವೆ ಎಂದು ವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ ತಿಳಿಸಿದ್ದಾರೆ.
-ವರದಿ ಮತ್ತು ಚಿತ್ರ : ಅರೆಯೂರು ಚಿ.ಸುರೇಶ್ , ತುಮಕೂರು.

 ನಾನು ವರದಿ ಮಾಡಿದ ಸುದ್ದಿ
http://www.vknews.in/2014/02/03/tumakooru-news/